ಪ್ರತಿದಿನವೂ ಓದಿಗೆ ಸಮಯ ಮೀಸಲಿಡಬೇಕು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಅಭಿಮತ
ಬೆಂಗಳೂರು: “ಪುಸ್ತಕ ಹಬ್ಬವೆಂದರೆ ಕೇವಲ ಮಳಿಗೆಗಳ ಪ್ರದರ್ಶನವಲ್ಲ; ಅದು ಲೇಖಕ ಮತ್ತು ಓದುಗ ಮುಖಾಮುಖಿಯಾಗುವ, ಒಂದು ತಲೆಮಾರಿನ ಅನುಭವ ಮತ್ತೊಂದು ತಲೆಮಾರಿನ ಕುತೂಹಲದೊಂದಿಗೆ ಸಂವಾದ ನಡೆಸುವ ಸುಂದರ ಸಂದರ್ಭ. ಒಂದು ಪುಸ್ತಕವನ್ನು...
ಬೆಂಗಳೂರು: “ಪುಸ್ತಕ ಹಬ್ಬವೆಂದರೆ ಕೇವಲ ಮಳಿಗೆಗಳ ಪ್ರದರ್ಶನವಲ್ಲ; ಅದು ಲೇಖಕ ಮತ್ತು ಓದುಗ ಮುಖಾಮುಖಿಯಾಗುವ, ಒಂದು ತಲೆಮಾರಿನ ಅನುಭವ ಮತ್ತೊಂದು ತಲೆಮಾರಿನ ಕುತೂಹಲದೊಂದಿಗೆ ಸಂವಾದ ನಡೆಸುವ ಸುಂದರ ಸಂದರ್ಭ. ಒಂದು ಪುಸ್ತಕವನ್ನು ಕೈಗೆತ್ತಿಕೊಂಡಾಗ ಅದರ ತೂಕ ಕೆಲವೇ ಗ್ರಾಂಗಳಿರಬಹುದು, ಆದರೆ ಅದು ಹೊತ್ತಿರುವ ಅನುಭವ ಶತಮಾನಗಳದ್ದಾಗಿರಬಹುದು” ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಅಭಿಪ್ರಾಯಪಟ್ಟರು.
Table Of Content
ಬೆಂಗಳೂರಿನ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್ನ ‘ಕೇಶವಶಿಲ್ಪ’ ಸಭಾಂಗಣದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಅಕ್ಟೋಬರ್ 31ರಿಂದ ಡಿಸೆಂಬರ್ 6ರ ವರೆಗೆ ಹಮ್ಮಿಕೊಳ್ಳಲಾಗಿರುವ 37 ದಿನಗಳ 6ನೇ ‘ಕನ್ನಡ ಪುಸ್ತಕ ಹಬ್ಬ–2026’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ವಿವೇಕದ ಅಗತ್ಯ:
ಇಂದಿನ ತಂತ್ರಜ್ಞಾನ ಯುಗದಲ್ಲಿ ಮಾಹಿತಿ ಅತಿ ವೇಗವಾಗಿ ಹರಡುತ್ತಿದೆ ಎಂಬುದನ್ನು ಸ್ಮರಿಸಿದ ನ್ಯಾಯಮೂರ್ತಿಗಳು, “ಯಾವುದೇ ಸಂದೇಶವನ್ನು ಮುಂದಕ್ಕೆ ಕಳುಹಿಸುವ (ಫಾರ್ವರ್ಡ್ ಮಾಡುವ) ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ತಾಳ್ಮೆ ನಮಗೆ ಬೇಕು. ಇದು ನಮ್ಮ ಓದುವ ಸಂಸ್ಕೃತಿಯ ಭಾಗವಾಗಬೇಕು. ಉತ್ತಮ ಪುಸ್ತಕಗಳು ನಮ್ಮ ಆತುರದ ತೀರ್ಮಾನಗಳನ್ನು ತಡೆದು, ವಿವೇಕದಿಂದ ಯೋಚಿಸುವ ಶಕ್ತಿಯನ್ನು ನೀಡುತ್ತವೆ” ಎಂದು ಕಿವಿಮಾತು ಹೇಳಿದರು.

ಬದುಕು ಹಾಗೂ ಸಾಹಿತ್ಯದ ನಂಟು:
ಭಾಷಾಂತರ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ಸಿಗಬೇಕು ಎಂದ ಅವರು, “ಕನ್ನಡದ ಮೂಲಕ ಜಗತ್ತಿನ ಜ್ಞಾನವನ್ನು ಅರಿಯುವಂತಾಗಬೇಕು. ರೈತನ, ಕಾರ್ಮಿಕನ ಅಥವಾ ಸಮಾಜದ ಅಂಚಿನಲ್ಲಿರುವವರ ಬದುಕಿನ ಕೃತಿಗಳನ್ನು ಓದಿದಾಗ ಮಾತ್ರ ಅವರ ನೋವು ಹಾಗೂ ಸ್ವಾಭಿಮಾನ ನಮಗೆ ಅರ್ಥವಾಗುತ್ತದೆ. ನ್ಯಾಯದಾನದ ಕ್ಷೇತ್ರದಲ್ಲೂ ಕೇವಲ ಕಾನೂನು, ಸಾಕ್ಷ್ಯಗಳಷ್ಟೇ ಅಲ್ಲದೆ, ಮನುಷ್ಯನ ಬದುಕಿನ ವಾಸ್ತವಗಳನ್ನು ಗ್ರಹಿಸುವ ಇಂತಹ ಸೂಕ್ಷ್ಮ ಸಂವೇದನೆ ಅತ್ಯಗತ್ಯ” ಎಂದರು.
ಈ ಸಾಹಿತ್ಯ ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಒಂದು ಸಣ್ಣ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದ ಅವರು, ಪ್ರತಿದಿನ ಓದಿಗೆ ಸ್ವಲ್ಪ ಸಮಯ ಮೀಸಲಿಡುವುದು, ಒಂದು ಒಳ್ಳೆಯ ಪುಸ್ತಕವನ್ನು ಮತ್ತೊಬ್ಬರಿಗೆ ಪರಿಚಯಿಸುವುದು, ಮಗುವಿಗೆ ಕಥೆ ಓದಿ ಕೇಳಿಸುವುದು ಹಾಗೂ ಸಾಧ್ಯವಾದಾಗಲೆಲ್ಲಾ ಶಾಲೆ ಅಥವಾ ಗ್ರಂಥಾಲಯಕ್ಕೆ ಉಪಯುಕ್ತ ಪುಸ್ತಕಗಳನ್ನು ನೀಡುವುದರಿಂದ ಸಮಾಜದಲ್ಲಿ ಉತ್ತಮ ಓದುವ ಸಂಸ್ಕೃತಿಯನ್ನು ಗಟ್ಟಿಗೊಳಿಸಬಹುದು ಎಂದರು.
ಜ್ಞಾನದ ಬೇರುಗಳನ್ನು ಅರಿಯುವುದು ಅವಶ್ಯ – ಶತಾವಧಾನಿ ಡಾ. ಆರ್. ಗಣೇಶ್:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪದ್ಮಭೂಷಣ ಪುರಸ್ಕೃತ ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್, “ಈ ಕಾಲದಲ್ಲಿ ಜನರನ್ನು ಸಭೆಗೆ ಕರೆತರುವುದು, ಪುಸ್ತಕ ಓದುವಂತೆ ಪ್ರೇರೇಪಿಸುವುದು ದೊಡ್ಡ ಸಾಹಸ. ನಮಗೆ ಬೇಕಾದುದನ್ನು ಮಾತ್ರ ಆರಿಸಿ ಆ ಹೊತ್ತಿಗೆ ಓದಿಕೊಳ್ಳುತ್ತೇವೆ ಎಂದರೆ ಜ್ಞಾನ ಹೇಗೆ ಬೆಳೆದು ಬಂದಿದೆ ಎಂಬುದು ತಿಳಿಯುವುದಿಲ್ಲ. ನಾವು ಕೆಲವೊಂದಿಷ್ಟು ವಿಚಾರಗಳಲ್ಲಾದರೂ ಸಂಪೂರ್ಣಗ್ರಾಹಿಗಳಾಗಿರಬೇಕು. ಅಂತಹ ಸಂದರ್ಭದಲ್ಲಿ ಮಿಕ್ಕ ಕೆಲವು ವಿಚಾರಗಳಲ್ಲಿ ಸಾರಗ್ರಾಹಿಗಳಾದರೆ ತೊಂದರೆಯಿಲ್ಲ. ‘ಸೆಲೆಕ್ಟಿವ್ ಅಮ್ನಿಷಿಯಾ’ (ಆಯ್ದ ವಿಷಯಗಳ ಅರಿವಿಲ್ಲದಿರುವುದು) ಮನುಷ್ಯನಲ್ಲಿ ಬಂದರೆ ಅದು ಬಹಳ ಅಪಾಯಕಾರಿ” ಎಂದು ಎಚ್ಚರಿಸಿದರು.
ಪುಸ್ತಕ ಹಬ್ಬದ ವಿಶೇಷತೆ: ರಾಷ್ಟ್ರೋತ್ಥಾನ ಪರಿಷತ್ನಲ್ಲಿ ಡಿಸೆಂಬರ್ 6ರ ವರೆಗೆ ನಡೆಯಲಿರುವ ಈ 37 ದಿನಗಳ ಬೃಹತ್ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಸೇರಿದಂತೆ ನಾಡಿನ ವಿವಿಧ ಪ್ರಮುಖ ಪ್ರಕಾಶನಗಳ ಪುಸ್ತಕಗಳು ಲಭ್ಯವಿದ್ದು, ಕೃತಿಗಳ ಮೇಲೆ ಶೇ 10 ರಿಂದ ಶೇ 60ರವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
No Comment! Be the first one.