ಕನ್ನಡ ಕಟ್ಟಿ ಬೆಳೆಸಿದ ಅ.ನ.ಕೃರವರನ್ನೇ ಮರೆತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಲೇಖಕರು: ಎಲ್. ಎಸ್. ಶಾಸ್ತ್ರಿ, ಬೆಳಗಾವಿ ಕನ್ನಡದ ಖ್ಯಾತ ಕಾದಂಬರಿಕಾರರೂ, ಅಗ್ರಗಣ್ಯ ಕನ್ನಡ ಹೋರಾಟಗಾರರೂ ಆದ ಅ. ನ. ಕೃಷ್ಣರಾಯರನ್ನು ಅರಿಯದ ಕನ್ನಡಿಗರಿಲ್ಲ. ಪರಭಾಷಿಕರ ಹಾವಳಿಯಿಂದ ತತ್ತರಿಸಿದ ರಾಜ್ಯದಲ್ಲಿ, ಅದರಲ್ಲೂ ರಾಜಧಾನಿ...
ಲೇಖಕರು: ಎಲ್. ಎಸ್. ಶಾಸ್ತ್ರಿ, ಬೆಳಗಾವಿ
ಕನ್ನಡದ ಖ್ಯಾತ ಕಾದಂಬರಿಕಾರರೂ, ಅಗ್ರಗಣ್ಯ ಕನ್ನಡ ಹೋರಾಟಗಾರರೂ ಆದ ಅ. ನ. ಕೃಷ್ಣರಾಯರನ್ನು ಅರಿಯದ ಕನ್ನಡಿಗರಿಲ್ಲ. ಪರಭಾಷಿಕರ ಹಾವಳಿಯಿಂದ ತತ್ತರಿಸಿದ ರಾಜ್ಯದಲ್ಲಿ, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲೇ ಕನ್ನಡ ಮೂಲೆಗುಂಪಾದಂತಹ ಪರಿಸ್ಥಿತಿಯಲ್ಲಿ ಮೊಟ್ಟ ಮೊದಲು ಕನ್ನಡಪರ ಚಳವಳಿಯನ್ನು ಶ್ರೀ ಎಂ. ರಾಮಮೂರ್ತಿ ಮತ್ತಿತರರ ಸಂಗಡ ಕೈಗೆತ್ತಿಕೊಂಡು ಕನ್ನಡ ಸಂಘಟನೆಯನ್ನು ಕಟ್ಟಿ ಹೋರಾಟಕ್ಕಿಳಿದು, ಮೊದಲ ಸಲ ಕನ್ನಡ ರಾಜ್ಯೋತ್ಸವ ಮೆರವಣಿಗೆಯನ್ನು ಮಾಡಿ, ರಾಮೋತ್ಸವಗಳಲ್ಲಿ ಕನ್ನಡದ ಅವಗಣನೆಯ ವಿರುದ್ಧ ಪ್ರತಿಭಟನೆ ಮಾಡಿ ನಮ್ಮ ಭಾಷೆಯ ಕುರಿತು ಕನ್ನಡಿಗರಲ್ಲಿ ಜಾಗೃತಿಯನ್ನುಂಟು ಮಾಡಿದವರು ಕೃಷ್ಣರಾಯರು.
ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು.

ಕನ್ನಡದ ಅಸ್ಮಿತೆಯ ಪ್ರಶ್ನೆ ಬಂದಾಗ ಅನಕೃ ಸಿಡಿದೇಳುತ್ತಿದ್ದರು. ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲೇ ರಾಮೋತ್ಸವದಂತಹ ಸಂದರ್ಭಗಳಲ್ಲಿ ಕನ್ನಡದ ಅವಗಣನೆ ಕಂಡು ಪ್ರತಿಭಟಿಸಿ ಕನ್ನಡಕ್ಕೆ ಅವಕಾಶ ಕಲ್ಪಿಸಿಕೊಟ್ಟವರು.
ಕರ್ನಾಟಕ ಸಂಭ್ರಮದ ಮೊದಲು ರಾಜ್ಯೋತ್ಸವದ ಮೆರವಣಿಗೆ ಆರಂಭಿಸಿದವರೇ ಕೃಷ್ಣರಾಯರು. ಹಳದಿ, ಕೆಂಪು ಬಣ್ಣದ ಕನ್ನಡ ಬಾವುಟವನ್ನು ತಂದವರು ಅನಕೃ ಪಟ್ಟಶಿಷ್ಯರಾದ ಎಂ. ರಾಮಮೂರ್ತಿಯವರು. ಅನೇಕ ಸಾಹಿತಿ, ಕಲಾವಿದರಿಗೆ ಆಶ್ರಯ ನೀಡಿ ಬೆಳೆಸಿದವರು. ಅವರ ಪ್ರಗತಿಶೀಲ ಸಾಹಿತ್ಯ ಚಳವಳಿಯ ಮೂಲಕ ತರಾಸು, ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟಿಮನಿ, ಕುಮಾರ ವೆಂಕಣ್ಣ, ವೆಂಕಟೇಶ, ಚಡಗ ಮೊದಲಾದ ಅಸಂಖ್ಯಾತ ಬರೆಹಗಾರರು ಕನ್ನಡಕ್ಕೆ ದೊರಕಿದರು.
ಇದೇ ಜುಲೈ 8ಕ್ಕೆ ಅನಕೃ ನಿಧನವಾಗಿ 55 ವರ್ಷ. ಕರ್ನಾಟಕ ಸರಕಾರಕ್ಕೆ ಅವರನ್ನು ಕುರಿತು ಒಂದು ಪ್ರತಿಷ್ಠಾನವನ್ನಾಗಲಿ, ಸ್ಮಾರಕವನ್ನಾಗಲಿ ಮಾಡಬೇಕೆಂದು ಈತನಕ ಅನಿಸಿಲ್ಲ. ಅವರ ಹೆಸರಲ್ಲಿ ಒಂದು ಪ್ರಶಸ್ತಿ ಸ್ಥಾಪಿಸಬೇಕೆಂದು ಅನಿಸಿಲ್ಲ. ಅವರ ಕುರಿತು ಒಂದು ಪಾಠವನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕೆಂದೂ ಅನಿಸಿಲ್ಲ.
2008ರಲ್ಲಿ ಅನಕೃ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ “ಅನಕೃ ಸಾಹಿತ್ಯ ಶ್ರೇಣಿ” ಎಂಬ ಸಮಗ್ರ ಸಂಪುಟ ಪ್ರಕಟನೆಯ ಕೆಲಸ ಕೈಗೆತ್ತಿಕೊಂಡು ಮೊದಲ ಮೂರು ವರ್ಷಗಳಲ್ಲಿ 8 ಸಂಪುಟಗಳನ್ನು ಹೊರತಂದಿತು. ನಂತರ ಈ ಜವಾಬ್ದಾರಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಒಪ್ಪಿಸಲಾಯಿತು. ಪುಸ್ತಕ ಪ್ರಾಧಿಕಾರವೂ ಎಂಟು ಸಂಪುಟ ಹೊರತಂದು ಅರ್ಧಕ್ಕೆ ಕೆಲಸ ನಿಲ್ಲಿಸಿಬಿಟ್ಟಿದೆ. ಇನ್ನೂ 8-10 ಸಂಪುಟಗಳು ಬರಬೇಕಿದ್ದರೂ ಕೆಲಸ ಮುಂದುವರಿಯುತ್ತಿಲ್ಲ. ಈ ಪ್ರಕಟಣೆ ಕಾರ್ಯ ಆರಂಭವಾಗಿ ಈಗಾಗಲೇ 18 ವರ್ಷಗಳಾಗಿವೆ. ಮನಸ್ಸು ಮಾಡಿದರೆ ಎರಡು ಮೂರು ವರ್ಷಗಳಲ್ಲಿ ಮುಗಿಸಬಹುದಾದ ಕೆಲಸ. ಸಂಬಂಧಪಟ್ಟ ಯಾರಿಗೂ ಇದರ ನೆನಪಿಲ್ಲ. ಆಸಕ್ತಿಯೂ ಇಲ್ಲ. ಇದು ಕನ್ನಡದ ಅಮರ ಸೇನಾನಿ ಅನಕೃ ಅವರಿಗೆ ಮಾಡುವ ಅಪಚಾರ.
ಇಲಾಖೆಯ ಅಧಿಕಾರಿಗಳಿಗೆ ಅದರ ನೆನಪೂ ಇದ್ದಂತೆ ಕಂಡುಬರುತ್ತಿಲ್ಲವೆನ್ನುವದು ದುರ್ದೈವದ ಸಂಗತಿ. ಖಾಸಗಿಯಾಗಿ ಶ್ರೀ ರಮೇಶ ಎಂಬ ಓರ್ವ ಮಹನೀಯರು ಅನಕೃ ಮೇಲಿನ ಅಭಿಮಾನದಿಂದ “ಅನಕೃ ಕನ್ವೆನ್ಷನ್ ಸೆಂಟರ್” ಎಂಬ ಒಂದು ಭವನ ನಿರ್ಮಿಸಿದ್ದಾರೆ. ಅನಕೃ ಕುಟುಂಬದವರು ಮಿತ್ರರು ಸೇರಿ ಪ್ರತಿ ವರ್ಷ ಒಂದು ಪ್ರಶಸ್ತಿ ನೀಡುತ್ತಿದ್ದಾರೆ. ಆದರೆ ಕರ್ನಾಟಕ ಸರಕಾರ ಈ ವಿಷಯದಲ್ಲಿ ತನ್ನ ಕರ್ತವ್ಯ ನಿರ್ವಹಿಸುತ್ತಿಲ್ಲವೆನ್ನುವುದು ಬೇಸರದ ವಿಷಯ.
ಇನ್ನಾದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಅಕಾಡೆಮಿ, ಪ್ರಾಧಿಕಾರಗಳು ಎಚ್ಚೆತ್ತುಕೊಂಡು ಉಳಿದ ಸಂಪುಟಗಳನ್ನು ತ್ವರಿತವಾಗಿ ಮುದ್ರಿಸಿ ಹೊರತಂದು ಅನಕೃ ಅವರಿಗೆ ತಕ್ಕ ಗೌರವ ಸಲ್ಲಿಸಲಿ. ಅನಕೃ ಸಾಹಿತ್ಯ ಪ್ರೇಮಿಗಳಿಗೆ, ಸಾಹಿತ್ಯಾಭ್ಯಾಸಿಗಳಿಗೆ ಅವರ ಪೂರ್ಣ ಕೃತಿಗಳು ದೊರಕುವಂತಾಗಲಿ. ಅನಕೃ ಅವರಂತಹ ಅಪ್ಪಟ ಕನ್ನಡಾಭಿಮಾನಿಗೆ, ಕನ್ನಡ ಹೋರಾಟಗಾರನಿಗೆ ಈ ರೀತಿಯ ಅವಗಣನೆ, ಅಪಮಾನ ಮಾಡುವುದು ಸರಿಯಲ್ಲ. ಕನ್ನಡ ಮತ್ತು ಸಂಸ್ಕೃತಿ ಸಚಿವರು ಇತ್ತ ಗಮನ ಹರಿಸುವರೇ?
No Comment! Be the first one.