ಅನ್ಯ ಭಾಷಿಗರ ಉಪಟಳ ಇನ್ನೆಷ್ಟು ದಿನ..? | ಭಾವಸಿಂಚನ ಸಂಪಾದಕೀಯ
ಭದ್ರಾವತಿ ರಾಮಾಚಾರಿ ಹೌದು. ನಿಜ. ‘ಕರ್ನಾಟಕ ಕನ್ನಡಿಗರ ಸ್ವತ್ತು. ಕರ್ನಾಟಕದಲ್ಲಿರುವರೆಲ್ಲಾ ಕನ್ನಡ ಭಾಷೆ ಮಾತನಾಡಬೇಕು, ಕನ್ನಡದಲ್ಲಿ ವ್ಯವಹರಿಸಬೇಕು. ಬೇರೆ ಯಾವುದೋ ರಾಜ್ಯದವರಾದ ನಿಮಗೆ ನಿಮ್ಮ ಭಾಷೆಯ ಮೇಲೆ ಅದೆಷ್ಟು ಪ್ರೇಮವಿದೆಯೋ...
ಭದ್ರಾವತಿ ರಾಮಾಚಾರಿ
ಹೌದು. ನಿಜ. ‘ಕರ್ನಾಟಕ ಕನ್ನಡಿಗರ ಸ್ವತ್ತು. ಕರ್ನಾಟಕದಲ್ಲಿರುವರೆಲ್ಲಾ ಕನ್ನಡ ಭಾಷೆ ಮಾತನಾಡಬೇಕು, ಕನ್ನಡದಲ್ಲಿ ವ್ಯವಹರಿಸಬೇಕು. ಬೇರೆ ಯಾವುದೋ ರಾಜ್ಯದವರಾದ ನಿಮಗೆ ನಿಮ್ಮ ಭಾಷೆಯ ಮೇಲೆ ಅದೆಷ್ಟು ಪ್ರೇಮವಿದೆಯೋ ಕನ್ನಡಿಗರಾದ ನಮಗೆ ನಮ್ಮ ಭಾಷೆಯ ಮೇಲೆ ಅದಕ್ಕಿಂತಲೂ ಪ್ರೇಮ, ಅಭಿಮಾನವಿದೆ. ಅನ್ನಕ್ಕಾಗಿ ಆಶ್ರಯಿಸಿ ಬಂದ ನೀವು ನಿಮ್ಮ ಧಿಮಾಕು, ಪೊಗರನ್ನು ನಿಮ್ಮ ನಿಮ್ಮ ಮನೆಯಲ್ಲಿಟ್ಟು ಬನ್ನಿ. ಕನ್ನಡಿಗರೊಂದಿಗೆ ಗೌರವಯುತವಾಗಿ, ಸೌಹಾರ್ದಯುತವಾಗಿ, ಸ್ನೇಹಪೂರ್ವಕವಾಗಿ ಬದುಕಿ.
ಕರ್ನಾಟಕದವರು ವಿಶಾಲ ಹೃದಯದವರು. ಕನ್ನಡಿಗರು ಸ್ನೇಹಜೀವಿಗಳು. ನಿಮ್ಮ ಭಾಷೆಯನ್ನು ಇಲ್ಲಿ ಹೇರಲು ಬರಬೇಡಿ. ನಿಮ್ಮ ಗೂಬೆ ಬೆದರಿಕೆಗೆ ಹೆದರುವವರು ನಾವಲ್ಲ. ನಮಗೆ ಬೇರೆ ಯಾವುದೇ ಭಾಷೆಯ ಮೇಲೆ ತಿರಸ್ಕಾರ ಭಾವನೆಯಿಲ್ಲ. ನಮ್ಮ ತಾಯ್ನೆಲದ ಭಾಷೆಗೆ ಅವಮಾನಿಸಿದರೆ ಸುಮ್ಮನೆ ಕೂರುವವರು ನಾವಲ್ಲ’ ಹೀಗೆ ಕನ್ನಡ ಪರ ಸಂಘಟನೆಗಳು ಅನೇಕ ವರ್ಷಗಳಿಂದ ಅನ್ಯ ಭಾಷಿಗರು ನಮ್ಮ ಕನ್ನಡ ಭಾಷೆಗೆ ಅವಮಾನ ಎಸಗಿದಾಗಲೆಲ್ಲಾ ಎಚ್ಚರಿಸುತ್ತಲೇ ಬಂದಿವೆ. ಆದರೂ ಅವರುಗಳು ತಿದ್ದಿಕೊಂಡಿಲ್ಲ. ಪದೇ ಪದೇ ಕ್ಯಾತೆ ತೆಗೆಯುತ್ತ ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುತ್ತಲೇ ಬಂದಿದ್ದಾರೆ. ಇಂಥವರಿಗೆ ತಕ್ಕ ಪಾಠ ಕಲಿಸುವವರು ಯಾರು? ಕನ್ನಡಿಗರೆಲ್ಲಾ ಒಗ್ಗಟ್ಟಾಗಿ ಪಾಠ ಕಲಿಸಲೇಬೇಕಾಗಿರುವುದು ಅನಿವಾರ್ಯವಾಗಿದೆ.
ಯಾವ ರಾಜ್ಯದ ನೆಲವನ್ನು ತುಳಿಯುತ್ತೇವೆಯೋ ಆ ರಾಜ್ಯ ನಮ್ಮದು, ಅಲ್ಲಿನ ಭಾಷೆ, ಸಂಸ್ಕೃತಿ ನಮ್ಮದು ಎಂಬ ಭಾವನೆ ಯಾರಲ್ಲಿ ಮೂಡುವುದಿಲ್ಲವೋ ಅವರುಗಳಿಂದ ಅವಮಾನಗಳಂಥ ವಿಷ ಬೀಜ ಪಸರಿಸುತ್ತಲೇ ಇರುತ್ತದೆ. ಇದು ಅಪಾಯಕಾರಿ ಬೆಳವಣಿಗೆ. ಇದರಿಂದ ಸಾಮರಸ್ಯ ಹಾಳಾಗುತ್ತದೆ. ಅಸಮಾಧಾನ ಹೊಗೆಯಾಡುತ್ತದೆ. ಹೀಗೆ ದ್ವಂದ್ವ ಮನಸ್ಥಿತಿಯುಳ್ಳವರಿಗೆ ಕಾನೂನು ರಕ್ಷಾ ಕವಚವಾಗಬಾರದು.
ನವೆಂಬರ್ ತಿಂಗಳು ಬಂತೆಂದರೆ ಸಾಕು, ಗಲ್ಲಿ ಗಲ್ಲಿಗಳಲ್ಲಿ ರಾಜ್ಯೋತ್ಸವ ಸಂಭ್ರಮವನ್ನು ಆಚರಿಸಲಾಗುತ್ತದೆ. ಕೆಲವು ಅನಾಮಧೇಯ ಕನ್ನಡ ಸಂಘಟನೆಗಳು ಚಂದಾ ವಸೂಲಿಗೆ ಇಳಿಯುತ್ತವೆ. ಕನ್ನಡೇತರರಿಂದ ‘ಇಂತಿಷ್ಟೇ ಹಣ’ ಎಂದು ಪೀಕುವ ಮಟ್ಟಕ್ಕೆ ಇಳಿಯುವುದರಿಂದ ಕನ್ನಡಿಗರಿಗೆ ಅವಮಾನ ಎಸಗಿದಂತಾಗುವುದಿಲ್ಲವೆ? ಸಾರ್ವಜನಿಕರಿಂದ ಒತ್ತಾಯಪೂರ್ವಕವಾಗಿ ಹಣ ಸಂಗ್ರಹಣೆ ಮಾಡಿ ರಾಜ್ಯೋತ್ಸವ ಆಚರಿಸುವ ಬದಲು ತಮ್ಮ ತಮ್ಮ ಮಿತಿಯಲ್ಲಿ ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಯೋಚಿಸಲಿ. ಕೆಲವು ಸ್ಥಳೀಯ ರಾಜಕಾರಣಿಗಳು ತಮ್ಮ ಹಣಬಲದಿಂದ ಆಯೋಜಿಸುವ ಕಾರ್ಯಕ್ರಮಗಳು ಫ್ಲೆಕ್ಸ್, ಬ್ಯಾನರ್ಗಳು, ಬೃಹತ್ ವೇದಿಕೆ, ದೀಪಾಲಂಕಾರಗಳಿಂದ ಒಂದು ದಿನದ ಮಟ್ಟಿಗೆ ರೋಡ್ ಬ್ಲಾಕ್ ಮಾಡಿ ಧಾಂ ಧೂಂ ಎನ್ನುವಂತೆ ಸದ್ದು ಮಾಡುತ್ತವೆ. ಕನ್ನಡ ರಾಜ್ಯೋತ್ಸವದ ನಿಜವಾದ ಅರ್ಥ ಅಂತಹ ವೇದಿಕೆಗಳಲ್ಲಿ ಕಾಣಸಿಗುವುದಿಲ್ಲ. ಜನ ಸಾಮಾನ್ಯರು ವ್ಯವಹರಿಸುವ ಬ್ಯಾಂಕುಗಳಲ್ಲಿ ಕೂಡಾ ಹೊರ ರಾಜ್ಯದವರದ್ದೇ ಕಾರುಬಾರು. ಕನ್ನಡಿಗರಾದ ನಾವು ಅನ್ಯಭಾಷಿಕರಿಗಾಗಿ ಅವರ ಭಾಷೆ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ. ಗೇಟು ಕಾಯುವ ಸೆಕ್ಯೂರಿಟಿ ಗಾರ್ಡ್ಗಳಿಂದ ಹಿಡಿದು ನೆಲಕ್ಕೆ ಟೈಲ್ಸ್ ಹಾಕುವವರೆಗೆ ಇತರೆ ರಾಜ್ಯದ ಮಂದಿ ಬಂದು ವಕ್ಕರಿಸಿಕೊಂಡಿದ್ದಾರೆ. ನಮ್ಮ ದಿನಗೂಲಿಗೂ ಕತ್ತರಿ ಬಿದ್ದಾಗಿದ್ದರೂ ಕೂಡಾ ನಾವು ಇನ್ನೂ ನಿದ್ರಾವಸ್ಥೆಯಲ್ಲಿದ್ದೇವೆ.
ಆರು ಕಾಸಿಗೆ ಆಗ ಬೇಕಾದ ಕೆಲಸವನ್ನು ಮೂರು ಕಾಸಿಗೆ ಮಾಡಿ ಮುಗಿಸುತ್ತಿದ್ದಾರೆ. ‘ನಮ್ಮವರಿಗೆ ಮೊದಲು ಕೆಲಸ, ನಂತರವಷ್ಟೇ ಅನ್ಯ ಭಾಷಿಕರಿಗೆ’ ಎಂಬ ಧೋರಣೆ ನಮ್ಮ ಕರ್ನಾಟಕದ ಜನಗಳಿಗೆ ಎಂದು ಬರುತ್ತದೆ?
‘ಮೊದಲು ನಮ್ಮವರು, ನಂತರ ಬೇರೆಯವರು’ ಎಂಬ ಅಭಿಯಾನ ಆರಂಭಿಸುವುದೊಂದೇ ಬಾಕಿ. ಇನ್ನು ನಮ್ಮನ್ನಾಳುವ ಸರ್ಕಾರಗಳಿಗೆ ಅದರದ್ದೇ ಆದ ಗೊಂದಲ, ಗೋಜಲುಗಳು. ರಾಜ್ಯೋತ್ಸವ ಪ್ರಶಸ್ತಿಗೆ ಲಾಬಿ ಮಾಡಿದವರಿಗಷ್ಟೇ ಪಾಲು. ಅರ್ಹರಿಗೆ ದೊರೆಯುವುದು ಅಪರೂಪ ಎಂಬಂತಾಗಿರುವಾಗ ಅದರ ಬಗ್ಗೆ ಆಡುವ ಮಾತುಗಳೂ ನಿರರ್ಥಕ.
ತಕ್ಷಣಕ್ಕೆ ಆಗಬೇಕಿರುವುದು ಕರ್ನಾಟಕ ನಮ್ಮದು, ಕನ್ನಡ ಭಾಷೆ ನಮ್ಮದು. ಕನ್ನಡಕ್ಕೆ ಪ್ರಥಮ ಸ್ಥಾನ. ಕನ್ನಡಿಗರಿಗೆ ಮೊದಲು ಉದ್ಯೋಗ. ನಾಡ ದ್ರೋಹಿಗಳಿಗೆ ಗಡಿಪಾರು. ಇವುಗಳು ಅನುಷ್ಠಾನಕ್ಕೆ ಬಂದರೆ ಕನ್ನಡ, ಇಲ್ಲಿಯ ಸಂಸ್ಕೃತಿ ಹಚ್ಚ ಹಸಿರಾಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳ ಉತ್ಸವವಾಗದೆ ನಿತ್ಯೋತ್ಸವವಾಗಿ ಬದಲಾಗಬೇಕಿದೆ.

No Comment! Be the first one.