ಬರ (ಕಿರು ಕಥೆ)
ಲೇಖಕರು: ಶೇಖರಗೌಡ ವೀ ಸರನಾಡಗೌಡರ್, ತಾವರಗೇರಾ “ಬಸಣ್ಣಾ, ಸಾರೋರು ಗೋಶಾಲೆ ಮಾಡ್ಯಾರಂತ?” “ಹೌದು ಸಾಹುಕಾರೇ.” “ಮತ್ತೆ ನಿನ್ನ ದನ್ನೋಳನ್ನು ಗೋಶಾಲ್ಯಾಗ ಬಿಟ್ಟಿಯೇನು?” “ಬಿಟ್ಟೇನಿ ಧಣಿ.” “ಹಂಗಾದ್ರೆ ನಿನ್ ದನ್ನೋಳಿಗೆ ಮೇವು, ಸೊಪ್ಪಿ-ಗಿಪ್ಪಿ...
ಲೇಖಕರು: ಶೇಖರಗೌಡ ವೀ ಸರನಾಡಗೌಡರ್, ತಾವರಗೇರಾ
“ಬಸಣ್ಣಾ, ಸಾರೋರು ಗೋಶಾಲೆ ಮಾಡ್ಯಾರಂತ?”
“ಹೌದು ಸಾಹುಕಾರೇ.”
“ಮತ್ತೆ ನಿನ್ನ ದನ್ನೋಳನ್ನು ಗೋಶಾಲ್ಯಾಗ ಬಿಟ್ಟಿಯೇನು?”

“ಬಿಟ್ಟೇನಿ ಧಣಿ.”
“ಹಂಗಾದ್ರೆ ನಿನ್ ದನ್ನೋಳಿಗೆ ಮೇವು, ಸೊಪ್ಪಿ-ಗಿಪ್ಪಿ ಸಿಕ್ಕಂಗಾತು. ಮೂಕ ಪ್ರಾಣಿಗೋಳ್ ಹಸಿವು, ಬವಣೆ ತೀರಂಗಾತು. ನಮ್ಮೂರಿನ ದನ್ನೋಳಿಗೆ ಚೊಲೋ ಆತು ಬಿಡು.”
“ಅಲ್ಲೇನೈತ್ರಿ ಮಣ್ಣು. ಈಗ ಮೂರಿಗ್ನಿಂದ ಮಳಿ ಇಲ್ಲ, ಬೋರ್ ಬತ್ತೈತೆ. ದಿವ್ಯದ ಇಪ್ಪತ್ನಾಲ್ಕು ತಾಸಿನ್ಯಾಗ ಒಂದೆರಡು ತಾಸೂ ಸೈತಿ ಕರೆಂಟ್ ಇರಂಗಿಲ್ಲ. ಇದ್ದ ಬೆಳಿ ಒಣಗೋಗೈತೆ.”
“ಹೌದೇ? ಅಲ್ಲಿ ನೋಡಿದ್ರೆ ಒಂದು ದನಕ್ಕ, ಒಂದು ಸೂಡು ಸೊಪ್ಪಿನೂ ಸಿಗಂಗಿಲ್ಲ. ಎಲ್ಲಾದ್ರೂ ಅಡವಿ-ಗಿಡವಿಗೆ ಹೊಡ್ಕೊಂಡು ಹೋಗಿ ಮೇಸ್ಕೊಂಡು ಬರೇಕಂದ್ರೆ ಎಕ್ಕಡೆ ನೋಡಿದ್ರೂ ಒಣ, ಒಣ, ಟಣ, ಟಣ. ಏನ್ಮಾಡೋದು? ಆ ದ್ಯಾವಿಗೆ ನಮ್ಮ ಮ್ಯಾಲೆ ಅದೇನು ಸಿಟ್ಟೋ ಏನೋ? ಆತಂಗೆ ನಮ್ಮ ಗೋಳಿನ ಕತಿ ಮುಟ್ಟಿಲ್ಲಂತ ಅನಸತೈತಿ. ಹುಟ್ಟಿದ ದ್ಯಾವ್ರು ಹುಲ್ಲು ಮೇಸಂಗಿಲ್ಲ ಅಂತ ನಿಮ್ಮಂತ ತಿಳಿದೋರು ಹೇಳ್ತಾರೆ. ಆದ್ರೆ ನಮ್ಮ ನೋವು ಯಾರೇಲ್ವೇಕು? ಪಾಪದ ಮೂಕ ಪ್ರಾಣಿಗೋಳಿಗೆ ಆ ಹುಲ್ಲು ಇಲ್ದಂಗಾಗೈತೆ. ಎಲ್ಲಾ ನಮ್ಮ ಹಣೇಬರ. ನಾವು ಪಡ್ಕೊಂಡು ಬಂದಿದ್ದು. ಅನುಭವಿಸ್ಟೇಕು ಅಷ್ಟೇ.”
“ಹಿಂಗಂತಿಯೇನು? ಹಂಗಾದ್ರೆ ಗೋಶಾಲ್ಯಾಗೆ ವ್ಯವಸ್ಥಾ ಸರಿ ಇಲ್ಲಂತೀಯೇನು?”
“ಏನೂ ಸರಿ ಇಲ್ಲ.”
“ಅಲ್ಲ, ಮತ್ತೆ ಸರ್ರದೋವು ಬರಗಾಲ ನೀಗೋಕೆ ಅದೇನೋ ಮೋಡ ಬಿತ್ತನೆ ಶುರು ಮಾಡ್ತಾರಂತ? ಅದನ್ನು ಮಾಡಿದ್ರೆ ಮಳಿ ಗಿಳಿ ಬರೋದು.”
“ಹೌದ್ರೀ ಸಾಹುಕಾರೇ. ಮೋಡ ಬಿತ್ತನೆ ಮಾಡ್ತೀವಿ ಅಂತ ಮಂತ್ರಿಗೋಳ್ ಈಗ ಎದ್ದು ತಿಂಗ್ನಿಂದ ಹೇಳ್ತಾನೆ ಇದ್ದಾ. ಆದ್ರೆ ಮೋಡ ಬಿತ್ತನೆ ಇಲ್ಲ, ಯಾವೂ ಇಲ್ಲ. ಎಲ್ಲಾ ಬರೀ ಬಡಾಯಿ ಅಷ್ಟ.”
“ಹೌದೇನೋ?”
“ಹುಂ.”
“ಅಲ್ಲೋ, ನೀನು ನಿನ್ನ ಎರೆಕೆ ಹೊಲ್ದಾಗ ಬೋರ್ ಹೊಡ್ಲಿ ಪಂಪ್ಲೆಟ್ ಕೂಡ್ತಿದ್ದೆಲ್ಲ, ಅದೆಂಗ ಐತೆ?”
“ಕರೆಂಟು ಹೆಚ್ಚು-ಕಮ್ಮಿ ಬರೋದ್ರಿಂದ ನಾಕ ಬಾರಿ ಮೋಟರ ಸುಟ್ಟೋಗಿ ನಿಮ್ಮಾಕ ಸಾಲ ಬಾಳ ಆಗೈತಿ. ಏನು ಆಗ್ಲೀ, ಈ ದೇಶ್ವಾಗ ರೈತನಾಗಿ ಹುಟ್ಟಾರು ನೋಡ್ರಿ. ಯಾವೋ ಶಾಪ ನಮ್ಮೆ ಹತ್ತೈತಿ. ಅಕ್ಕಡೆ ಸತ್ತಿಲ್ಲ. ಇಕ್ಕಡೆ ಬದ್ದಿಲ್ಲ, ಹಂಗ ಅದೀವಿ ನಾವು. ಏನೋ ಪಾಪಮಾಡಿ ಹುಟ್ಟಿದ್ದೇಕು ನಾವು.”
“ಹಂಗ್ ಅನ್ವೇಡ್ವ ಬಸಣ್ಣ. ನಾನಿಲ್ಲೇನು?”
“ಬಂಗಾರ ಮನುಷ್ಯ ಸಿನಿಮಾದ ರಾಚೂಟೆಪ್ಪಂಗ ನೀವು ಅದೀರಂತ ನಾನು ಜೀವ ಹಿಡ್ಕೊಂಡೀನಿ ಸಾಹುಕಾರೇ. ನಿಮ್ ಋಣ್ಣಾಗ ಸಾಯೋದೇ ಐತೇನೋ ನನ್ ಹಣೆಬರಾಗ.”
“ಹಂಗೆಲ್ಲಾ, ಬ್ಯಾಸ ಮಾಡೋ ಬ್ಯಾಡೋ? ನಿನ್ನಂತ ರೈತ್ರಿಂದೇನೇ ನಮ್ಮಂತೋರು ಬರೋದು ಅಲ್ವೇನು?”
“ದೊಡ್ಡ ಮಾತು ಹೇಳಿದ್ರಿ. ಆದ್ರೆ ಎಲ್ಲಾ ಸಾಹುಕಾರು ನಿಮ್ಮಂಗಿಲ್ಲ ಧಣಿ?”
“ಹೌದು, ಬರ ಪರಿಹಾರ ಅಂತ ಸಾರ್ದೋರು ಅದೇನೋ ಬಾಳ ದುಡ್ಡು ನಿಮ್ಮ ಬ್ಯಾಂಕ್ ಖಾತೆ ಜಮಾ ಮಾಡ್ತಾರಂತ. ನಿಮ್ಮ ಖಾತೆ ನಂಬ್ರು ತೊಗೊಂಡಾರಂತ? ನೀನೂ ಕೊಟ್ಟಿರೇಕಲ್ಲ?”
“ಖಾತೆ ನಂಬ್ರೇನೋ ಕೊಡ್ತೀನಿ. ಆದ್ರೆ ಅದೇನೋ ಎಕ್ರೆಗೆ ಮುನ್ನೂರೋ, ಐನ್ನೂರೋ, ಎಷ್ಟೋ ಹಾಕ್ತಾರಂತ್ರೀ. ಈ ವರ್ಷ ನಾ ಹಾಕಿದ್ ಉಳ್ಳಾಗಡ್ಡಿ ಬೆಳೆ ಸರ್ಯಾಗಿ ಬಂದಿದ್ರೆ ನಾಕು ಲಕ್ಷ ಆಗ್ತಿತ್ತು. ಬೆಳೆ ನೀರಿಕ್ಷೆ, ಕರೆಂಟ್ ಇಲ್ಲೆ ಅಂಗ ಒಣಗಿ ಹೋತ, ನೀವು ಖುದ್ ನೋಡಿರಲ್ಲಿ ಸಾಹುಕಾರೇ. ಆದ್ರೆ ಇವು ಅದಕ್ಕೆ ಐನ್ನೂರೋ, ಸಾವ್ರೋ ಕೊಡ್ತಾರಂತೆ.”
“ನಿನ್ ಪರಿಸ್ಥಿತಿ ನೋಡಿ ನನ್ನಂತೂ ಹೊಟ್ಯಾಗ ಖಾರ ಕಲ್ಲಿದಂಗಾಗಲಿಕತೈತಿ. ಮಳಿರಾಯ ನಿಮ್ ಪಾಲಿಗೆ ಬಲ್ವೇಕು. ನಿಂದು ನೀರಾವರಿ ಬೆಳೆ ಅಲ್ಲೇನೋ? ನೀರಾವರಿ ಬೆಳಿಗೆ ಹೆಚ್ಚಿನ ಪರಿಹಾರ ಕೊಡ್ತೀವಿ ಅಂತ ಸಾರ್ದೋರು ಹೇಳಿದ್ದು ಎಲ್ಲೋ ಪೇಪರಿನ್ಯಾಗ ಓದಿದ್ದು ನಂಗೆ ನೆಪ್ಪಿದೆ.”
“ಅದೆಲ್ಲಾ ಸುಮ್ಮೇ ಕಣ್ಣೂರುವ ತಂತ್ರ ಹೇಳ್ತಂಗೆ ಯಾವೂ ಮಾಡ್ತಿದ್ದಾರೆ ಸಾರ್ದೋರು? ಯಾವೂ ಇಲ್ಲ ಧಣಿ. ಬೆಂಗ್ಳೂರಿನ್ಯಾಗ ಕುಳ್ಳಿರುವ ಯಾವ ದೊರೆಗೂ ನಮ್ಮ ಗೋಳು ಕೇಳ್ತಾ ಇಲ್ಲ. ನೀವ್ ಇಲ್ಲಿಲ್ಲಂದ್ರೆ ನಾನೂ ಇಷ್ಟೊತ್ತಿಗೆ ಕೊಡ್ಲಿಗೆ ಹಗ್ಗ ಬಿಕ್ಕೊಂಡು ಭೂತಾಯಿ ಋಣ ತೀರಿ ಕಾಣ್ಣ ಲೋಕಕ್ಕೆ ಹೋಗ್ತಿದ್ದೆ. ನೀವೇ ನೋಡ್ತಿದ್ದೀರಲ್ಲ, ದಿನಾ ಅದೆಷ್ಟು ರೈತ್ರು ಸಾಯ್ಲಿಕತ್ಯಾರ ಸಾಲದ ಹೊರೆ ತಾಳ್ತಾರೆ.”
“ಸಮಾಧಾನ ಮಾಡ್ಕೊ ಬಸಣ್ಣ. ಕಾಲ ಹೀಂಗ ಇರೋದಿಲ್ಲ. ಒಳ್ಳೆ ದಿನ್ಗಳು ಬಂದೇ ಬಾವ. ಧೈರ್ಯ ಬಿಡ್ಯಾಡ. ಆ ನಮ್ಮಪ್ಪ ಶಿವಪ್ಪ ಸುಮ್ಮೇ ಇರಾಂಗಿಲ್ಲ. ಗಂಗವ್ವನ ಕಳಸ್ತಾನ.”
“ಆ ಧಣೇರಾ. ನಾ ಬರ್ರೀನಿ.”
“ನಿಂದೋ, ಹಾಂಗ್ ಹೊಂಟ್ವಿಟ್ಟೆಲ್ಲ. ಇಗಾ ಹಿಡಿ, ಸದ್ಯ ಇದು ನಿಂತಾಕ ಇರ್ಲಿ” ಎಂದೆನ್ನುತ್ತಾ ಸಾಹುಕಾರ ಗುರುಸಿದ್ದಪ್ಪನೋರು ಬಸಣ್ಣನ ಕೈಯಾಗ ಕೆಲವು ಐದು ನೂರರ ನೋಟುಗಳನ್ನು ತುರುಕಿದರು.
“ಧಣೇರಾ, ಬ್ಯಾಡ್ರಿ. ಈಗ ಮಾಡಿರೋ ಸಾಲಾನ್ನೇ ನನ್ಸೆಲಿ ತೀರೋಕ್ಕಾಗಂಗಿಲ್ಲ. ಮತ್ತೆ ಹೊಸ ಸಾಲಬ್ಯಾಡ್ರಿ.” ಬಸಣ್ಣ ಪ್ರತಿಭಟಿಸಿದ.
“ಹಂಗಲ್ಲೋ, ಕಷ್ಟದಾಗ ಮನುಷ್ಯ ಮನುಷ್ಯಾಗ ಸಹಾಯ ಮಾಡಿದ್ರೆ ಆ ದ್ಯಾವ್ರು ಮೆಚ್ಚಾನಂತ, ನಂತಾಕ ಐತಿ, ಕೊಡ್ಲಕ್ಕತೀನಿ. ನೀ ಇದನ್ನ ಸಾಲ ಅಂತ ತಿಳ್ಕೊಬ್ಯಾಡ. ಮುಂದ ನಿಂಗೆ ಒಳ್ಳೆ ಬೆಳೆ ಬಂದಾಗ ಕೊಡು. ಇದಕ್ಕೆ ಬಡ್ಡಿ-ಗಿಡ್ಡಿ ಏನೂಬ್ಯಾಡ.” ಸಾಹುಕಾರ್ರು ಒತ್ತಾಯ ಮಾಡಿ ಬಸಣ್ಣನ ಅಂಗಿ ಕಿಸೆಯೊಳಗೆ ನೋಟುಗಳನ್ನು ಇಟ್ಟರು.
ಸಾಹುಕಾರರ ವಿಶಾಲ ಹೃದಯಕ್ಕೆ ಬಸಣ್ಣನ ಕಣ್ಣುಗಳು ತೇವಗೊಳ್ಳತೊಡಗಿದವು. ಕಣ್ಣೀರು ಒರೆಸಿಕೊಳ್ಳುತ್ತಾ, “ಇಂತವೂ ಇನ್ನೂ ಈ ಕಲಿಗಾಲ್ಟಾಗ ಇದ್ದಾರೆ. ಗುರುಸಿದ್ದಪ್ಪೋರೇ ನಂಗೆ ದೇವು” ಎಂದು ಮನದೊಳಗೇ ಅಂದುಕೊಳ್ಳುತ್ತಾ ಮನೆ ಕಡೆಗೆ ಹೆಜ್ಜೆ ಹಾಕಿದ ಬಸಣ್ಣ.
ಸಾಹುಕಾರರ ವಿಶಾಲ ಹೃದಯಕ್ಕೆ ಬಸಣ್ಣನ ಕಣ್ಣುಗಳು ತೇವಗೊಳ್ಳತೊಡಗಿದವು. ಕಣ್ಣೀರು ಒರೆಸಿಕೊಳ್ಳುತ್ತಾ, “ಇಂತವೂ ಇನ್ನೂ ಈ ಕಲಿಗಾಲ್ಟಾಗ ಇದ್ದಾರೆ. ಗುರುಸಿದ್ದಪ್ಪೋರೇ ನಂಗೆ ದೇವು” ಎಂದು ಮನದೊಳಗೇ ಅಂದುಕೊಳ್ಳುತ್ತಾ ಮನೆ ಕಡೆಗೆ ಹೆಜ್ಜೆ ಹಾಕಿದ ಬಸಣ್ಣ.
No Comment! Be the first one.