ದಿವಿಗೆ ಹಿಂದಿರುಗಿದ ದಿವ್ಯ ಧ್ವನಿ
ಲೇಖಕರು: ಸುಧಾಕರ್ ಕಲ್ಟಾರ್, ಬೆಂಗಳೂರು ಮನಸ್ಸಿಗೆ ರಂಜನೆಯನ್ನು ನೀಡಬೇಕಾದ್ದು ಮನುಷ್ಯನ ಕರ್ತವ್ಯ. ಸಂಗೀತದ ಆಸ್ವಾದನೆ ಅದರಲ್ಲಿ ಒಂದು ವಿಧಾನ. ಸಾಧಾರಣ ಮನುಷ್ಯನಿಗೆ ಸಂಗೀತದ ಸವಿಯನ್ನು ನೀಡಲು ಕೆಲವರನ್ನು ಭಗವಂತ ಭೂಮಿಗೆ ಕಳಿಸಿರುತ್ತಾನೆ....
ಲೇಖಕರು: ಸುಧಾಕರ್ ಕಲ್ಟಾರ್, ಬೆಂಗಳೂರು
ಮನಸ್ಸಿಗೆ ರಂಜನೆಯನ್ನು ನೀಡಬೇಕಾದ್ದು ಮನುಷ್ಯನ ಕರ್ತವ್ಯ. ಸಂಗೀತದ ಆಸ್ವಾದನೆ ಅದರಲ್ಲಿ ಒಂದು ವಿಧಾನ. ಸಾಧಾರಣ ಮನುಷ್ಯನಿಗೆ ಸಂಗೀತದ ಸವಿಯನ್ನು ನೀಡಲು ಕೆಲವರನ್ನು ಭಗವಂತ ಭೂಮಿಗೆ ಕಳಿಸಿರುತ್ತಾನೆ. ಅಂಥವರಲ್ಲಿ ಒಬ್ಬರು ಎಸ್ ಜಾನಕಿ. ಅವರ ಕರ್ತವ್ಯ ಮುಗಿದಿದೆ ಎನ್ನುವಂತೆ ಆ ದಿವ್ಯ ಧ್ವನಿ ದಿವಿಗೆ ಹಿಂತಿರುಗಿದೆ. ಅದಕ್ಕೆ ವಿಷಾದ ಬೇಕಿಲ್ಲ. ಯಾಕೆಂದರೆ ಎಸ್. ಜಾನಕಿ ಅವರ ಧ್ವನಿ ನಮ್ಮೊಂದಿಗೆ ಜೀವಂತವಾಗಿದೆ.
ಯಶಸ್ವಿ ವೃತ್ತಿ ಬದುಕಿಗೆ ನಿವೃತ್ತಿಯನ್ನು ಘೋಷಿಸುವುದು ಅತ್ಯಂತ ಕಷ್ಟ. ಆದರೆ ಎಸ್ ಜಾನಕಿಯವರು ಯಾವುದೇ ಮೋಹವಿಲ್ಲದೆ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿದರು. ‘ಪ್ರತಿಭಾವಂತರು ಮತ್ತು ಹಾಡಲು ಬಯಸುವ ಮಕ್ಕಳು ತುಂಬಾ ಜನ ಇದ್ದಾರೆ. ಯಾವತ್ತೂ ನಾವೇ ಹಾಡುತ್ತಿದ್ದರೆ ಅವರು ಯಾವತ್ತು ಹಾಡುವುದು?’ ಸಂದರ್ಶನ ಒಂದರಲ್ಲಿ ಜಾನಕಿಯವರೇ ಹೇಳಿದ ಮಾತಿದು. ಅಷ್ಟೊಂದು ಬೇಡಿಕೆ ಇರುವಾಗಲೇ ನಿವೃತ್ತಿಯಾದುದರ ಹಿಂದೆ ಇಂಥ ಒಂದು ಕಾರಣವಿದೆ. ಪ್ರತಿಭಾವಂತ ಮಕ್ಕಳ ಬಗ್ಗೆ ಅವರಿಗೆ ಎಷ್ಟು ಪ್ರೀತಿ!

ಆಂಧ್ರ ಪ್ರದೇಶದಲ್ಲಿ ಕಾರ್ಯಕ್ರಮ ನಡೆಯುತ್ತಾ ಮಧ್ಯೆ ಚಂದ್ರಶೇಖರ್ ಪಾತ್ರ ಬದಲಿಸಲು ಮೇಕಪ್ ಮಾಡಿಕೊಳ್ಳಲೆಂದು ಗ್ರೀನ್ ರೂಮಿಗೆ ಹೋದಾಗ ಪುಟ್ಟ ಬಾಲಕಿಯೊಬ್ಬಳು ಹಾಡಲೆಂದು ವೇದಿಕೆಯರಿದಳು. ಶ್ಯಾಮಲ ವರ್ಣದ, ಕೃಶ ಕಾಯದ ಸುಮಾರು 12 ವರ್ಷದ ಬಾಲಕಿಯನ್ನು ಕಂಡು ಕಾಲೇಜಿನ ವಿದ್ಯಾರ್ಥಿಗಳು ಹುಯ್ದೆಬ್ಬಿಸಿದರು. ಆದರೆ ಅದನ್ನೆಲ್ಲ ಲೆಕ್ಕಿಸುವ ಸ್ವಭಾವ ಬಾಲಕಿಯದಲ್ಲ. ಧೈರ್ಯದಿಂದ ಹಾಡಲಾರಂಭಿಸಿದಳು. ‘ಮೇರಾ ದಿಲ್ ಏ ಪುಕಾರೆ ಆಜಾ……’ ಸಭಾಂಗಣದಲ್ಲಿ ಹಾಡು ಮೊಳಗಲಾರಂಬಿಸುತ್ತಿದ್ದರೆ ಪ್ರೇಕ್ಷಕರು ಮಂತ್ರ ಮುಗ್ಧರಾದರು. ಹಾಡು ಮುಗಿಯುತ್ತಿದ್ದಂತೆ ಪ್ರೇಕ್ಷಕರಿಂದ ಚಪ್ಪಾಳೆಗಳ ಸುರಿಮಳೆ. ಆ ಬಾಲಕಿಯೇ ನಂತರದ ದಿನಗಳಲ್ಲಿ ಗಾನಕೋಗಿಲೆ ಎಂದು ಹೆಸರು ಮಾಡಿದ ಎಸ್ ಜಾನಕಿ.
ಎಸ್ ಜಾನಕಿ ಅವರನ್ನು ಭಗವಂತ ಭೂಮಿಗೆ ಹಾಡಲೆಂದೇ ಕಳುಹಿಸಿದ್ದು. ‘ನನಗೆ ಸಂಗೀತ ಜ್ಞಾನ ಜನ್ಮದೊಂದಿಗೇ ಬಂದಿತ್ತು. ನನ್ನ ಮೂರನೇ ವಯಸ್ಸಿನಲ್ಲಿ ನಾನು ಚೆನ್ನಾಗಿ ಹಾಡುತ್ತಿದ್ದೆ. ನನ್ನ ಹತ್ತನೇ ವಯಸ್ಸಿನಲ್ಲಿ ನನ್ನ ಅಮ್ಮ ಬಲವಂತವಾಗಿ ನನ್ನನ್ನು ಸಂಗೀತ ಕಲಿಯಲು ಕಳುಹಿಸಿದಳು. ಗುರುಗಳಿಂದ ಸಂಗೀತವನ್ನು ಒಂದು ವರ್ಷ ಮಾತ್ರ ಕಲಿತೆ’ ಎನ್ನುತ್ತಾರೆ ಎಸ್ ಜಾನಕಿ.
ರಾಜಮಂಡ್ರಿಯಲ್ಲಿ ‘ಕ್ರಾಂತಿ ಕಲಾಮಂಡಳಿ’ ಎಂಬ ಸಂಸ್ಥೆಯೊಂದನ್ನು ವಿದ್ಯಾರ್ಥಿಗಳು ಸ್ಥಾಪಿಸಿದ್ದರು. ಆಗ ರಾಯಲಸೀಮೆ ಬರದ ಬವಣೆಗೆ ಸಿಲುಕಿತ್ತು. ಕ್ರಾಂತಿ ಕಲಾ ಮಂಡಳಿಯ ಮೂಲಕ ಸಂಗೀತ ಕಾರ್ಯಕ್ರಮಗಳನ್ನು ನಡೆಸಿ ಹಣ ಸಂಪಾದಿಸಿ ರಾಯಲ ಸೀಮೆಗೆ ಕಳುಹಿಸುತ್ತಿದ್ದರು. ಮಹಿಳಾ ಗಾಯಕಿಯಾಗಿ ಎಸ್ ಜಾನಕಿ ಅವರನ್ನು ಕರೆಸಿಕೊಂಡಿದ್ದರು. ಲತಾ ಮಂಗೇಶ್ವರ್ ಅವರ ಜನಪ್ರಿಯವಾಗಿದ್ದ ಹಾಡುಗಳನ್ನು ಜಾನಕಿಯವರು ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. ಅದನ್ನು ಜನರು ಅಪಾರವಾಗಿ ಮೆಚ್ಚಿಕೊಂಡಿದ್ದರು. ಹೀಗೆ ಅಧಿಕೃತವಾಗಿ ಗಾಯಕಿ ಅನ್ನಿಸಿಕೊಳ್ಳುವುದಕ್ಕೂ ಮುನ್ನವೇ ಜನರ ಮನಸ್ಸಿನಲ್ಲಿ ಸ್ಥಾನಗಿಟ್ಟಿಸಿಕೊಂಡವರು ಎಸ್ ಜಾನಕಿ.
ಸಿನಿಮಾ ಗಾಯನ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಜಾನಕಿಯವರು ತಮಗೆ ತಾವೇ ಸಾಟಿ ಎನ್ನುವಂತೆ ಜನಪ್ರಿಯರಾದರು. ತಮಿಳು, ತೆಲುಗು, ಮಲಯಾಳಂ, ಕನ್ನಡ.. ಹೀಗೆ ಭಾಷೆಗಳ ಭೇದವಿಲ್ಲದೆ ತಮ್ಮ ಹಾಡುಗಳ ಮೂಲಕ ಸಂಗೀತಾಸಕ್ತ ಮನಸುಗಳಿಗೆ ಗಾಯನ ಸುಧೆಯ ಸವಿ ಉಣಿಸಿದರು.
80ರ ದಶಕದಲ್ಲಿ ಹದಿಹರೆಯಕ್ಕೆ ಕಾಲಿಡುತ್ತಿದ್ದ ಹಳ್ಳಿಯ ಮಕ್ಕಳಿಗೆ ಸಿನಿಮಾಗಳು ಅಷ್ಟಾಗಿ ಪರಿಚಯ ಇರುತ್ತಿರಲಿಲ್ಲ. ಆದರೆ ಎಸ್ ಜಾನಕಿ ಅವರು ತಮ್ಮ ಭಕ್ತಿ ಗೀತೆಗಳ ಮೂಲಕ ಮನೆ ಮನೆಗಳಿಗೂ ಚಿರಪರಿಚಿತರಾಗಿದ್ದರು. ಅದು ಟೇಪ್ ರೆಕಾರ್ಡರ್ ಜನಪ್ರಿಯವಾಗುತ್ತಿದ್ದ ಕಾಲ. ಮುಂಜಾನೆ ಬಹುತೇಕ ಮನೆಗಳಲ್ಲಿ ಭಕ್ತಿಗೀತೆಗಳನ್ನು ಪ್ಲೇ ಮಾಡುತ್ತಿದ್ದರು. ಮದರಾಸಿನ ‘ಸಂಗೀತಾ’ ಕಂಪನಿ, ಕರ್ನಾಟಕದ ‘ಲಹರಿ’ ಆಡಿಯೋ ಕಂಪನಿಗಳು ಸ್ಪರ್ಧೆಗೆ ಬಿದ್ದವರಂತೆ ಭಕ್ತಿಗೀತೆಗಳ ಆಡಿಯೋ ಕ್ಯಾಸೆಟ್ಟನ್ನು ಮಾರುಕಟ್ಟೆಗೆ ಬಿಡುತ್ತಿದ್ದರು. ಎಸ್ ಜಾನಕಿ ಅವರು ಹಾಡಿದ ಭಕ್ತಿ ಗೀತೆಗಳು ಪ್ರತಿ ಮನೆಗಳಲ್ಲೂ ಮುಂಜಾನೆ ಸಾಹಿತ್ಯ ಮತ್ತು ಸಂಗೀತ ಸೊಬಗನ್ನು ಪಸರಿಸುತ್ತಿದ್ದವು.
‘ಕೃಷ್ಣ ನೀ ಬೇಗನೆ ಬಾರೋ’, ‘ನಂದ ಕಿಶೋರ ನವನೀತ ಚೋರ’…. ಹಾಡುಗಳನ್ನು ಎಸ್ ಜಾನಕಿ ಅವರ ಕಂಠಸಿರಿಯಲ್ಲಿ ಕೇಳಿದ ಬಾಲ್ಯದ ನೆನಪುಗಳು ಅವಿಸ್ಮರಣೀಯ. ಸಾಮಾನ್ಯ ಮನುಷ್ಯರ ಹೃದಯ ಮುಟ್ಟಲು ತಟ್ಟಲು ಹರಿದಾಸರು ರಚಿಸಿದ ದೇವರ ನಾಮಗಳು ಜಾನಕಿಯರ ಇನಿ ದನಿಯಲ್ಲಿ ಮನೆ ಮನೆಗಳ ಭಕ್ತ ಜನರ ಹೃದಯವನ್ನು ಮೀಟಿದವು. ಧರ್ಮಸ್ಥಳದ ಮಂಜುನಾಥ, ಉಡುಪಿಯ ಶ್ರೀ ಕೃಷ್ಣ, ವಿಘ್ನ ವಿನಾಯಕ ಗಣೇಶ… ಮುಂತಾದ ದೇವರುಗಳನ್ನು ಭಜಿಸುವ ಜಾನಕಿ ಅವರ ಹಾಡುಗಳು ಜನರ ಮನದಲ್ಲಿ ಜಾಗ ಪಡೆದವು.
ಮನೆಯ ಯಾವುದೇ ಖಾಸಗಿ ಪೂಜಾ ಕಾರ್ಯಕ್ರಮಗಳಲ್ಲಿ, ಶಾಲಾ ವಾರ್ಷಿಕೋತ್ಸವಗಳಲ್ಲಿ, ಸಂಘ ಸಂಸ್ಥೆಗಳ ವಿಶೇಷ ಕಾರ್ಯಕ್ರಮಗಳಲ್ಲಿ ಜಾನಕಿ ಅವರ ಹಾಡುಗಳು ಪ್ರಸಾರವಾಗುತ್ತಿದ್ದವು. ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಗಾಯನ ಸ್ಪರ್ಧೆ ಏರ್ಪಡಿಸಿದರೆ ಟೀಚರ್ಗಳು ಮಕ್ಕಳಿಗೆ ಹಾಡಲು ಕಲಿಸುತ್ತಿದ್ದುದು ಎಸ್ ಜಾನಕಿ ಅವರ ಹಾಡುಗಳನ್ನು. ಇದರ ಜೊತೆಗೆ ‘ದೇವರ ಆಟ ಬಲ್ಲವರಾರು’, ‘ಮಹಾಲಕ್ಷ್ಮಿ ಮನೆಗೆ ಬಾರಮ್ಮ’, ‘ನಂಬಿದೆ ನಿನ್ನ ನಾದ ದೇವತೆ’, ‘ಬಿಸಿಲಾದರೇನು ಮಳೆಯಾದರೇನು’… ಹಾಡುಗಳು ಮಕ್ಕಳಿಗೆ ಬಾಯಿ ಪಾಠ ಆಗುತ್ತಿತ್ತು. ನೀ ಬರೆದ ಕಾದಂಬರಿ ಚಿತ್ರದ ‘ನೀ ಮೀಟಿದ ನೆನಪೆಲ್ಲವೂ’… ಎಷ್ಟು ಕಾಲೇಜು ವಾರ್ಷಿಕೋತ್ಸವಗಳಲ್ಲಿ ಮಕ್ಕಳ ಸಂಗೀತ ಸ್ಪರ್ಧೆಗಳಲ್ಲಿ ಹಾಡಾಗಿ ಬಹುಮಾನ ಪಡೆದಿದೆ ಎಂಬುದನ್ನು ಲೆಕ್ಕವಿಟ್ಟವರಾರು?
ಜಾನಕಿ ಅವರು ಎಸ್ ಪಿ ಬಾಲಸುಬ್ರಮಣ್ಯಂ ಅವರ ಜೊತೆಗೆ ಹಾಡುವಾಗ ನಡೆದ ಅನೇಕ ಸಂಗತಿಗಳನ್ನು ಸ್ಮರಿಸುವಾಗ ಅದನ್ನು ಕೇಳುವುದೇ ಒಂದು ಸೊಗಸು. ಜಾನಕಿಯವರು ಹೇಳುತ್ತಾರೆ ಕೆಲವು ಬಾರಿ ಟ್ರ್ಯಾಕ್ನಲ್ಲಿ ನನ್ನ ಪೋರ್ಷನ್ ಅನ್ನು ನಾನು ಮೊದಲೇ ಪ್ರತ್ಯೇಕವಾಗಿ ಹಾಡಿರುತ್ತೇನೆ. ನಾನು ಹಾಡುವಾಗ ಸಾಧಾರಣವಾಗಿ ಮೊದಲ ಚರಣದಲ್ಲಿ ಸಂಗೀತ ನಿರ್ದೇಶಕರು ಹೇಳಿದಂತೆ ಹಾಡುತ್ತೇನೆ. ಪಲ್ಲವಿ ಆದ ಬಳಿಕ ಪುನರಾವರ್ತನೆಗಳಲ್ಲಿ ಅಥವಾ ಚರಣದ ಅಂತ್ಯದಲ್ಲಿ ನಾನು ನನ್ನ ಸ್ವಂತ ಪ್ರತಿಭೆಯಿಂದ ಸೃಜನಾತ್ಮಕ ‘ಸಂಗತಿ’ ಒಂದನ್ನು ಹಾಡುತ್ತೇನೆ. ನಾನು ಹಾಡಿ ಹೋದ ಬಳಿಕ ಹಾಡಲು ಬರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ನಾನು ಹಾಡಿದ ಸ್ವಂತ ‘ಸಂಗತಿ’ಯನ್ನು ಕೇಳಿಕೊಂಡು ಅದನ್ನು ಆರಂಭದಲ್ಲಿ ಹಾಡಿಬಿಡುತ್ತಾನೆ. ಇಬ್ಬರೂ ಹಾಡಿದ್ದು ಮಿಕ್ಸ್ ಆಗಿ ಪೂರ್ಣ ಹಾಡು ಹೊರ ಬಂದಾಗ ಹಾಡು ಕೇಳಿದವರು ‘ಆಹಾ ಬಾಲಸುಬ್ರಹ್ಮಣ್ಯಂ ಎಷ್ಟು ಚೆನ್ನಾಗಿ ಹಾಡಿದ್ದಾನೆ! ಅದನ್ನು ಕೇಳಿಕೊಂಡು ಎಸ್ ಜಾನಕಿ ಅವರು ಅದೇ ರೀತಿ ಹಾಡಿದರು’ ಎಂದು ಉದ್ಧರಿಸುತ್ತಾರೆ. ಆದರೆ ಅದನ್ನು ಮೊದಲು ನಾನು ಹಾಡಿದ್ದು ಎಂದು ಹೇಳುವವರು ಯಾರು? ಎನ್ನುತ್ತಾರೆ ಜಾನಕಿ. ಪಕ್ಕದಲ್ಲಿರುವ ಎಸ್ ಪಿ ಬಾಲಸುಬ್ರಮಣ್ಯಂ ಅದನ್ನು ಕೇಳಿ ಜಾನಕಿ ಅವರ ಭುಜದ ಮೇಲೆ ತಲೆ ಇಟ್ಟು ನಗುತ್ತಾರೆ. ಎಷ್ಟೊಂದು ಆಪ್ಯಾಯಮಾನ ಸನ್ನಿವೇಶವಿದು! ಎಸ್ ಜಾನಕಿ ಅವರ ಪ್ರಚಂಡ ಪ್ರತಿಭೆಯನ್ನು ಮತ್ತೊಬ್ಬ ದಿಗ್ಗಜ ಗಾಯಕ ಹೃದಯಪೂರ್ವಕ ಒಪ್ಪಿಕೊಳ್ಳುವ ಸಂಗತಿ ಇದು!
ಸಂಗೀತವು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಅದು ಕೇವಲ ಮನರಂಜನೆಯ ಸಾಧನವಲ್ಲ, ಮನಸ್ಸಿಗೆ ನೆಮ್ಮದಿ, ಆತ್ಮಕ್ಕೆ ಸಾಂತ್ವನ ಮತ್ತು ಬದುಕಿಗೆ ಹೊಸ ಚೈತನ್ಯ ನೀಡುವ ಅದ್ಭುತ ಶಕ್ತಿ. ಸಂತಸದ ಕ್ಷಣಗಳನ್ನು ಇನ್ನಷ್ಟು ಸೊಗಸಾಗಿಸುವುದರ ಜೊತೆಗೆ ದುಃಖದ ಸಮಯದಲ್ಲಿ ಧೈರ್ಯ ಮತ್ತು ಭರವಸೆಯನ್ನು ನೀಡುವ ಸಾಮರ್ಥ್ಯ ಸಂಗೀತಕ್ಕಿದೆ. ಮನುಷ್ಯನ ಭಾವನೆಗಳನ್ನು ಪದಗಳಿಗಿಂತ ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಭಾಷೆಯೇ ಸಂಗೀತ. ಒತ್ತಡ, ಆತಂಕ ಮತ್ತು ದೈನಂದಿನ ಜೀವನದ ಗೊಂದಲಗಳ ನಡುವೆ ಮನಸ್ಸನ್ನು ಸಮತೋಲನದಲ್ಲಿ ಇರಿಸಲು ಸಂಗೀತ ನೆರವಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಸಂಗೀತವನ್ನು ಒಂದು ಕಲೆಯಾಗಿ ಮಾತ್ರವಲ್ಲದೇ ಆಧ್ಯಾತ್ಮಿಕ ಸಾಧನೆಯ ಮಾರ್ಗವಾಗಿಯೂ ಪರಿಗಣಿಸಲಾಗಿದೆ. ಮನುಷ್ಯನ ಮನಸ್ಸಿನ ಆರೋಗ್ಯ, ಭಾವನಾತ್ಮಕ ಬೆಳವಣಿಗೆ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಂಗೀತದ ಪಾತ್ರ ಅತ್ಯಂತ ಮಹತ್ವದ್ದು.
ಮನಸ್ಸಿಗೆ ರಂಜನೆಯನ್ನು ನೀಡಬೇಕಾದ್ದು ಮನುಷ್ಯನ ಕರ್ತವ್ಯ. ಸಂಗೀತದ ಆಸ್ವಾದನೆ ಅದರಲ್ಲಿ ಒಂದು ವಿಧಾನ. ಸಾಧಾರಣ ಮನುಷ್ಯನಿಗೆ ಸಂಗೀತದ ಸವಿಯನ್ನು ನೀಡಲು ಕೆಲವರನ್ನು ಭಗವಂತ ಭೂಮಿಗೆ ಕಳಿಸಿರುತ್ತಾನೆ. ಅಂಥವರಲ್ಲಿ ಒಬ್ಬರು ಎಸ್ ಜಾನಕಿ. ಅವರ ಕರ್ತವ್ಯ ಮುಗಿದಿದೆ ಎನ್ನುವಂತೆ ಆ ದಿವ್ಯ ಧ್ವನಿ ದಿವಿಗೆ ಹಿಂತಿರುಗಿದೆ. ಅದಕ್ಕೆ ವಿಷಾದ ಬೇಕಿಲ್ಲ. ಯಾಕೆಂದರೆ ಎಸ್. ಜಾನಕಿ ಅವರ ಧ್ವನಿ ನಮ್ಮೊಂದಿಗೆ ಜೀವಂತವಾಗಿದೆ.
No Comment! Be the first one.