ಸಂಪಾದಕೀಯ: ಎಚ್ಚೆತ್ತುಕೊಳ್ಳದಿದ್ದರೆ ತುತ್ತು ಅನ್ನಕ್ಕೂ ಪರದಾಡಬೇಕಾದೀತು
ಮನುಷ್ಯ ಎಸಗುವ ತಪ್ಪುಗಳಿಗೆ ಲೆಕ್ಕವೇ ಇಲ್ಲ. ವಿದ್ಯಾಲಯಗಳಲ್ಲಿ ವಿದ್ಯೆಯನ್ನು ಹುಡುಕುತ್ತ, ದೇವಾಲಯಗಳಲ್ಲಿ ದೇವರನ್ನು ಹುಡುಕುತ್ತ ಸದಾ ಅಂಡಲೆಯುತ್ತಲೇ ಇರುತ್ತಾನೆ. ಆದರೆ ಆತ ತಾನು ಎಸಗಿರುವ ಹೇಯ ಕೃತ್ಯಗಳ ಬಗ್ಗೆ ಎಂದಿಗೂ ಆತ್ಮಾವಲೋಕನ...
ಮನುಷ್ಯ ಎಸಗುವ ತಪ್ಪುಗಳಿಗೆ ಲೆಕ್ಕವೇ ಇಲ್ಲ. ವಿದ್ಯಾಲಯಗಳಲ್ಲಿ ವಿದ್ಯೆಯನ್ನು ಹುಡುಕುತ್ತ, ದೇವಾಲಯಗಳಲ್ಲಿ ದೇವರನ್ನು ಹುಡುಕುತ್ತ ಸದಾ ಅಂಡಲೆಯುತ್ತಲೇ ಇರುತ್ತಾನೆ. ಆದರೆ ಆತ ತಾನು ಎಸಗಿರುವ ಹೇಯ ಕೃತ್ಯಗಳ ಬಗ್ಗೆ ಎಂದಿಗೂ ಆತ್ಮಾವಲೋಕನ ಮಾಡಿಕೊಂಡಿಲ್ಲ ಎಂಬುದು ದುರಂತ. ಬಹುಶಃ ಮನುಷ್ಯ ಎಂಬ ಪ್ರಾಣಿ ಹೊರತು ಪಡಿಸಿ ಬೇರಾವ ಜೀವಿಗಳಿಂದಲೂ ಇಂತಹ ಕೃತ್ಯ ನಡೆದಿರುವುದಕ್ಕೆ ಸಾಧ್ಯವಿಲ್ಲ.
ಮರ, ಗಿಡ, ಹೂ, ಬಳ್ಳಿಗಳೂ ಸೇರಿದಂತೆ ಸಮಗ್ರ ಪ್ರಕೃತಿಯ ಜೊತೆ ನೇರ ಸಂವಹನ ನಡೆಸಿದ್ದಕ್ಕೋ ಏನೋ ಆತ ಬಯಸಿದ್ದಕ್ಕಿಂತಲೂ ಹೆಚ್ಚಾಗಿಯೇ ನೀಡಿತು. ಆತನ ಅಸ್ತಿತ್ವ ಅಳಿಯಬಾರದೆಂಬ ಏಕೈಕ ಕಾರಣಕ್ಕೆ ಸಂಜೀವಿನಿ ಪರ್ವತವನ್ನೇ ನೀಡಿದರೂ ಮಾನವ ತನ್ನ ಕ್ಷುಲ್ಲಕ ಬುದ್ಧಿ ಬಿಡಲಿಲ್ಲ. ಅನ್ನ, ಆಹಾರ, ಗಾಳಿ, ಬೆಳಕು ನೀಡಿದ ಪರಿಸರಕ್ಕೆ ಕೊಡಲಿಯ ಪೆಟ್ಟು ನೀಡುತ್ತ ನಾಶ ಮಾಡಲು ಮುಂದಾದ. ಮರಗಳ ಮಾರಣ ಹೋಮ ನಡೆಸಿದ. ಆದರೂ ಭೂ ತಾಯಿ ಮುನಿಸಿಕೊಳ್ಳಲೇ ಇಲ್ಲ. ಅದೆಷ್ಟೋ ಸಾವಿರ, ಲಕ್ಷ ವರುಷಗಳಷ್ಟು ಕಾಲ ಆತನ ಸದ್ಬುದ್ಧಿಯ ನಿರೀಕ್ಷೆಯಲ್ಲಿದ್ದರೂ ಮಾನವ ಪಾಠ ಕಲಿಯಲಿಲ್ಲ. ಪರಿಣಾಮ ಪ್ರಕೃತಿಯ ರೌದ್ರ ನರ್ತನ ಆರಂಭವಾಗಿದೆ. ಪರಿಸರ ನಾಶದಿಂದ ಜೀವ ಸಂಕುಲ ಅವಸಾನದ ಅಂಚಿನಲ್ಲಿ ಬಂದು ನಿಂತಿದೆ.
ಋತುಮಾನಗಳಲ್ಲಿನ ಬದಲಾವಣೆ, ಕಲುಷಿತವಾದ ಆಹಾರ, ನೀರು, ಗಾಳಿಯಿಂದ ತತ್ತರಿಸಿ ಹೋಗುತ್ತಿದ್ದಾನೆ. ತಾಪಮಾನ ಏರಿಳಿತದಿಂದ ಉಸಿರು ಬಿಗಿ ಹಿಡಿದು ನಿಂತಿದ್ದಾನೆ. ಆದರೂ ಪಾಠ ಕಲಿತಂತಿಲ್ಲ. ಅಭಿವೃದ್ಧಿ, ಮಣ್ಣು, ಮಸಿ ಅಂತ ಅರಣ್ಯಗಳ ಒತ್ತುವರಿ, ಕೆರೆಕಟ್ಟೆಗಳನ್ನು ಗುಳುಂ ಮಾಡಿ ಮುಗಿಲೆತ್ತರದ ಕಟ್ಟಡಗಳನ್ನು ನಿರ್ಮಿಸುತ್ತಿರುವುದರ ಫಲವಾಗಿ ವಾತಾವರಣದಲ್ಲಿನ ಅಸಮತೋಲನಕ್ಕೆ ಮುನ್ನುಡಿ ಬರೆದು ಜಾಗತಿಕ ತಾಪಮಾನವನ್ನು ಎದುರಿಸುತ್ತಿದ್ದಾನೆ. ನಗರೀಕರಣದ ನೆಪದಲ್ಲಿ ಕೃಷಿ ಭೂಮಿಯನ್ನು ಮಟ್ಟ ಮಾಡಿ ತಿನ್ನುವ ಅನ್ನಕ್ಕೂ ಪರದಾಡಬೇಕಾದಂತಹ ಪರಿಸ್ಥಿತಿ ನಿರ್ಮಿಸಿಕೊಂಡಿದ್ದಾನೆ.

125 ವರ್ಷಗಳಲ್ಲಿ ಕಂಡರಿಯದ ಬರದ ಭೀಕರತೆಯನ್ನು ಸಮಸ್ತ ಮಾನವ ಕುಲ ಎದುರಿಸುವಂತಾಗಿದೆ. ಸದಾ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿರುವ ರೈತರ ಬದುಕಿನಲ್ಲಿ ಬರಸಿಡಿಲು, ಕೃಷಿ ಪರಿಕರಗಳನ್ನು ಹೆಗಲ ಮೇಲೆ ಹೊತ್ತು ಮಳೆಗಾಗಿ ಮುಗಿಲು ನಿಟ್ಟಿಸುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ.
ಮುಂಗಾರು ಮಳೆ, ಬಿತ್ತನೆ ಎಂದೆಲ್ಲಾ ಕನಸು ಕಾಣುತ್ತ ಗೊಬ್ಬರ, ಟ್ರಾಕ್ಟರ್ ಎಂದು ಸಾಲ ಸೋಲ ಮಾಡಿದ್ದ ರೈತ ಸಾಲಗಾರರ ಉಪಟಳ ತಾಳಲಾರದೆ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾನೆ. ರೈತರ ಕಣ್ಣೀರು ಒರೆಸಲು, ಮೋಡ ಬಿತ್ತನೆ ಮಾಡಲು ಸರ್ಕಾರದ ಮೀನ ಮೇಷಗಳ ನಡುವೆಯೂ ಅಕ್ಕಿಯದರ ಮತ್ತಷ್ಟು ತುಟ್ಟಿಯಾಗಿದೆ. ಇದಕ್ಕೆ ಅಮೆರಿಕಾ-ಇರಾನ್ ದೇಶಗಳ ಸಂಘರ್ಷವೇ ಕಾರಣ. ತೈಲ ಬೆಲೆಯಲ್ಲಿನ ಏರಿಕೆಯೂ ಒಂದು ಕಾರಣವಾದರೆ ರಾಜ್ಯದಲ್ಲಿ ತತ್ತರಿಸಿದ ಭತ್ತದ ನಾಟಿಯೂ ಪ್ರಮುಖ ಕಾರಣ. ಮಳೆರಾಯ ಹೀಗೆಯೇ ತನ್ನ ಅವಕೃಪೆ ತೋರಿದರೆ ಮುಂದಿನ ದಿನಗಳಲ್ಲಿ ಬಿತ್ತನೆ ಕಾರ್ಯ ಸಂಪೂರ್ಣ ಕುಂಠಿತಗೊಂಡು ಮನುಷ್ಯ ಸೇವಿಸುವ ದಿನನಿತ್ಯದ ಆಹಾರಕ್ಕೂ ಬರ ಆವರಿಸುತ್ತದೆ.
ರಾಜ್ಯದ 826 ಹಳ್ಳಿಗಳು ನೀರಿನ ಕೊರತೆ ಎದುರಿಸುತ್ತಿವೆ. ಮುಂದಿನ ದಿನಗಳಲ್ಲಿ ವರುಣನ ಅವಕೃಪೆ ಹೀಗೆಯೇ ಮುಂದುವರೆದಿದ್ದೇ ಆದಲ್ಲಿ ಕುಡಿಯುವ ನೀರಿಗೆ ಮತ್ತಷ್ಟು, ಮಗದಷ್ಟು ಸಮಸ್ಯೆ ಎದುರಾಗಲಿದೆ. ಮುಂಗಾರು ಪ್ರವೇಶ ಪಡೆದು ಎರಡು ತಿಂಗಳು ಕಳೆದರೂ ಎಲ್ಲೂ ಸಮಾಧಾನಕರ ಮಳೆ ಆಗದೆ ಬರ ಆವರಿಸಿರುವುದು ಸ್ಪಷ್ಟ. ಸದ್ಯಕ್ಕೆ ಮೋಡ ಬಿತ್ತನೆಯೊಂದೇ ಸರ್ಕಾರದ ಮುಂದಿರುವ ದೊಡ್ಡ ಮಟ್ಟದ ಪರ್ಯಾಯ ಕ್ರಮಗಳಿಗೆ ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕಿದೆ.
ಕಾಂಕ್ರೀಟು ಕಾಡುಗಳ ಮಧ್ಯೆ ಗಿಡ, ಮರಗಳು ಕಣ್ಮರೆಯಾಗುತ್ತಾ ಹೋದಂತೆ ಮನುಷ್ಯ ಬದುಕಲು ಬೇಕಾದ ಮೂಲಭೂತ ಸೌಲಭ್ಯವನ್ನೇ ಕಳೆದುಕೊಳ್ಳಬೇಕಾದ ಅನಿವಾರ್ಯತೆಯ ಕತ್ತಿ ನೆತ್ತಿಯ ಮೇಲೆ ತೂಗುತ್ತಿದೆ. ಅದರಿಂದ ಪಾರಾಗಬೇಕಾಗಿರುವುದು ಇಂದಿನ ಜರೂರು. ಪ್ರಕೃತಿಯ ಜೊತೆ ಮನುಷ್ಯನ ವಿಕೃತಿಯ ಆಟ ಅಕ್ಷಮ್ಯ.
No Comment! Be the first one.